ಅಂತಸ್ಸರಿತ ಕಲ್ಲುಪ್ಪು ಬೃಹತ್ ಜಲಜ ಶಿಲಾಸಮೂಹವನ್ನು ಸೀಳಿಕೊಂಡು ಹೊರ ಚಾಚಿರುವ (ಅಂತಸ್ಸರಣ) ಬೃಹತ್ ಶಿಲಾಲವಣ (ರಾಕ್ ಸಾಲ್ಟ್) ನಿಕ್ಷೇಪ (ಸಾಲ್ಟ್ ಡೋಮ್). ಇಂಥ ಅಂತಸ್ಸರಿತ ಕಲ್ಲುಪ್ಪಿನ ಮುದ್ದೆಗಳು (ಸೀಳು ನೋಟದಲ್ಲಿ) ವೃತ್ತಾಕಾರ ಇಲ್ಲವೆ ಅಂಡಾಕಾರವಾಗಿರುತ್ತವೆ. ದಿಬ್ಬ ಲಂಬ ವಿಸ್ತೀರ್ಣಕ್ಕಿಂತ ಹೆಚ್ಚು ಸಮಾಂತರ ಹರವನ್ನು ಪಡೆದಿರುತ್ತದೆ. ಬಹಳ ಒತ್ತಡದಲ್ಲಿರುವ ಕಲ್ಲುಪ್ಪು ಪ್ಲಾಸ್ಟಿಕ್‍ನಂತೆ ಇಲ್ಲವೆ ಶಿಲಾಪಾಕದಂತೆ ಜಲಜಶಿಲೆಗಳನ್ನು ಸೀಳಿಕೊಂಡು ಅಂತಸ್ಸರಣ ವಾಗುವುದರಿಂದ ಲವಣ ದಿಬ್ಬಗಳು ಉದ್ಭವಿಸುತ್ತವೆ.  ಕೆಲವೊಮ್ಮೆ ಲವಣಗಳು ರಭಸದಿಂದ ಅಂತಸ್ಸರಿತವಾಗಿ ದಿಬ್ಬದ ಮೇಲ್ಮೈಯನ್ನು ತಲಪುವುದರಿಂದ, ಅವು ಘನ ಉಪ್ಪಿನ ಹಿಮನದಿಯಂತೆ ಸರಿಯುತ್ತವೆ. ಉದಾ: ಉತ್ತರ ಅಮೆರಿಕದ ಗಲ್ಫ್ ತೀರ ಪ್ರದೇಶದಲ್ಲಿ ಲವಣ ದಿಬ್ಬಗಳು ಸಾಮಾನ್ಯವಾಗಿ ಕಾಣಬರುತ್ತವೆ. ಇವು ಕಡಲಂಚಿಗಲ್ಲದೆ ಸಾಗರ ತಳದಲ್ಲೂ ಹರಡಿಕೊಂಡಿವೆ. ಆರ್ಥಿಕವಾಗಿ ಇವು ಬಹು ಉಪಯುಕ್ತ. ಕಾರಣ ಈ ದಿಬ್ಬಗಳಲ್ಲಿ ಕಲ್ಲೆಣ್ಣೆ (ಪೆಟ್ರೋಲಿಯಮ್) ನಿಕ್ಷೇಪಿತವಾಗಿರುತ್ತದೆ.  ಟೆಕ್ಸಾಸ್, ಲೂಸಿಯಾನ, ಗಲ್ಫ್‍ಕೋಸ್ಟ್‍ಗಳಲ್ಲಿರುವ ಲವಣ ದಿಬ್ಬಗಳೊಂದಿಗೆ ಗಂಧಕ (ಸಲ್ಫರ್) ಬೆರೆತಿರುತ್ತದೆ.  ಇದರ ರಚನಾ ವಿನ್ಯಾಸ ಸಂಕೀರ್ಣ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ